ಋಣನಿರ್ವಹಣೆ

ಋಣ ನಿರ್ವಹಣೆಯು (ಡೆಟ್ ಮ್ಯಾನೇಜ್‍ಮೆಂಟ್) ಒಂದು ವಿಶಿಷ್ಟ ಕಲೆ. ಋಣ ನಿರ್ವಹಣೆ, ಅಸಲು ಮತ್ತು ಬಡ್ಡಿಗಳ ಸಕಾಲಿಕ ಮರುಪಾವತಿ, ಪಾವತಿಯನ್ನು ಸರಿಯಾಗಿ ಯೋಜಿಸುವುದರಿಂದ ಉಂಟಾಗುವ ಪ್ರಯೊಜನಗಳು, ಇರುವ ಎಲ್ಲ ಸಾಲಗಳನ್ನು ಸರಿಯಾಗಿ ಯೋಜಿಸಿ, ಸಮಷ್ಟಿಯಾಗಿ ಎಲ್ಲ ಸಾಲಗಳನ್ನು ಸುಲಭವಾಗಿ ನಿರ್ವಹಣೆಯ ಸ್ಥಿತಿಗೆ ತಂದುಕೊಳ್ಳುವುದು. ಈ ಸಾಲ ನಿರ್ವಹಣೆಯು ವೈಯಕ್ತಿಕವಾಗಿ ಆಗಬಹುದು, ಒಂದು ಸಣ್ಣ ಸಂಸ್ಥೆಯಿಂದ ಹಿಡಿದು, ಕಂಪನಿ, ಸಾರ್ವಜನಿಕ ಉದ್ಯಮ, ಸರ್ಕಾರ, ಭಾರತೀಯ ರಿಸರ್ವ್ ಬ್ಯಾಂಕ್ ಮೊದಲಾದವುಗಳಿಂದ ವ್ಯವಸ್ಥಿತವಾಗಿ ನಿರ್ವಹಿಸಲ್ಪಡುವ ಈ ಸಾಲ ನಿರ್ವಹಣೆಯು ಹಣ ನೀತಿಯ ಒಂದು ಮುಖ್ಯ ವಿಧಾನವಾಗಿದೆ. 
ಸಾಲ ನಿರ್ವಹಣೆಯು ದೇಶದ ಸಾರ್ವಜನಿಕ ಆರ್ಥಿಕ ವ್ಯವಸ್ಥೆಯ ಒಂದು ಬಹು ಮುಖ್ಯ ಕಾರ್ಯವಾಗಿದೆ. ಇದಕ್ಕೆ ಸರಿಯಾಗಿ ಸ್ಥಿತಿಯ ಅರಿವು, ಸಂಸ್ಥೆಯ ಬಲಪಡಿಸುವ ವಿವಿಧ ವಿಧಾನಗಳು, ಸ್ವ ಸಾಮಥ್ರ್ಯದ ಅಭಿವೃದ್ಧಿ, ತರಬೇತಿ ಮುಂತಾದವುಗಳು.  ಪರಿಣಿತ ಸಾಲ ನಿರ್ವಹಣಾ ವ್ಯಕ್ತಿ / ತಂಡ ಇಲ್ಲಿ ಅವಶ್ಯಕವಾಗಿದೆ. 
ಪ್ರಸಕ್ತ 2005-06 ವರ್ಷದ ಆರ್ಥಿಕ ನೀತಿಯಲ್ಲಿ ಸರ್ಕಾರದ ಸಾಲ ನಿರ್ವಹಣೆಯ ಕಾರ್ಯವಿಧಾನಗಳನ್ನು ಪುನಃ ಪರಿಶೀಲಿಸಿ ಬಲಪಡಿಸುವ ಬಗ್ಗೆ ಒತ್ತುಕೊಡಲಾಗಿದೆ. ಆರ್ಥಿಕ ನೀತಿ ಮತ್ತು ಸಾಲ ನಿರ್ವಹಣಾ ನೀತಿಗಳನ್ನು ಪ್ರತ್ಯೇಕಿಸಿ ಕಾರ್ಯನಿರ್ವಹಣಾ ವಿಧಾನವನ್ನು ರೂಪಿಸಲು ಬಂದಿರುವ ಅಭಿಪ್ರಾಯಕ್ಕೆ ಮಾನ್ಯತೆ ನಿಡಲಾಗಿದೆ. 
ಭಾರತೀಯ ರಿಸರ್ವ್ ಬ್ಯಾಂಕ್ ಸಧ್ಯದಲ್ಲಿ ಹೊಸ ಹಣಕಾಸಿನ ಮಾರುಕಟ್ಟೆ ವಿಭಾಗವನ್ನು ಪ್ರಾರಂಭಿಸಿದೆ. ಈ ಹಣಕಾಸಿನ ಮಾರುಕಟ್ಟೆ ವಿಭಾಗದ ಕಾರ್ಯಗಳು ಈ ಕೆಳಗಿನಂತಿವೆ :

1. ಹಣಕಾಸಿನ ಕಾರ್ಯಗಳಾದ (ಅ) ತೆರೆದ ಹಣಕಾಸಿನ ಕಾರ್ಯಾಚರಣೆ (ಓಪನ್ ಮಾರ್ಕೆಟ್ ಆಪರೇಷನ್) (ಬ) ದ್ರವ್ಯತ್ವ ಹೊಂದಾಣಿಕೆ ಸೌಲಭ್ಯ (ಲಿಕ್ವಿಡಿಟಿ ಅಡ್ಜಸ್ಟ್‍ಮೆಂಟ್ ಫೆಸಿಲಿಟಿ) ಹಾಲಿ ದ್ರವ್ಯತ್ವ ಸೌಲಭ್ಯಗಳು (ಸ್ಟಾಂಡಿಂಗ್ ಲಿಕ್ವಿಡಿಟಿ ಫೆಸಿಲಿಟೀಸ್)  ಮತ್ತು ಮಾರುಕಟ್ಟೆ ಸ್ಥಿರೀಕರಣ ಯೋಜನೆ (ಮಾರ್ಕೆಟ್ ಸ್ಟೆಬಿಲೈಸೇóಷನ್ ಸ್ಕೀಮ್) (2) ಹಣ ಮಾರುಕಟ್ಟೆಯ ಸಾಧನ (ಉಪಕರಣ) ಗಳಾದ ಅಲ್ಪಕಾಲದ / ನೋಟೀಸಿನ / ಸಾವಧಿಯ ಹಣ, ಮಾರುಕಟ್ಟೆ ರಿಪೊ, ಅನುಬಂಧೀಕರಣಗೊಳಿಸಿರುವ (ಕೊಲ್ಲಾಟರಲೈಸ್ಡ್) ಸಾಲ ಕೊಳ್ಳುವ ಮತ್ತು ಕೊಡುವ ನಿರ್ಬಂಧಗಳು, ವಾಣಿಜ್ಯ ಸಂಲೇಖ ಪತ್ರ (ಕಮರ್ಷಿಯಲ್ ಪೇಪರ್), ಠೇವಣಿ ಪ್ರಮಾಣ ಪತ್ರ (ಸರ್ಟಿಫಿಕೇಟ್ ಆಫ್ ಡಿಪಾಸಿಟ್) ಹಾಗು (3) ಹಣ ಚಲಾವಣೆಯ ಉಸ್ತುವಾರಿ (ಮಾನಿಟರಿಂಗ್ ಆಫ್ ಮನಿ) ಕಾರ್ಯಗಳು.
ನಮ್ಮ ರಿಸರ್ವ್ ಬ್ಯಾಂಕ್ ಸಾರ್ವಜನಿಕ ಸಾಲವನ್ನು ನಿರ್ವಹಿಸುತ್ತದೆ ಮತ್ತು ಕೇಂದ್ರ ಹಾಗು ರಾಜ್ಯ ಸರ್ಕಾರಗಳ ಪರವಾಗಿ ತನಗೆ ದತ್ತವಾದ ಅಧಿಕಾರವನ್ನು ಬಳಸಿ ಹೊಸ ಸಾಲಗಳನ್ನು ನೀಡುತ್ತದೆ. ಸರ್ಕಾರಗಳ ಪರವಾಗಿ ನಗದು ಹಾಗು ದ್ರವ್ಯತ್ವಗಳನ್ನು ನಿರ್ವಹಿಸುತ್ತದೆ. ವಿವಿಧ ರೀತಿ, ನೀತಿ, ಸಾದನಗಳಿಂದ ಸಾಲ ಮುಂಗಡಗಳನ್ನು ಆಡಳಿತಾತ್ಮಕವಾಗಿ ನಿರ್ವಹಿಸುತ್ತದೆ. ಈ ಒಳಗಿನ (ದೇಶೀಯ) ಸಾಲ ನಿರ್ವಹಣೆಯ ಕಾರ್ಯ ಕೇಂದ್ರವು ಈ ಸಾಲ ನಿರ್ವಹಣೆಯ ಕಾರ್ಯವನ್ನು ಮಾಡುತ್ತದೆ. ಸರ್ಕಾರಿ ಸಾಲಪತ್ರಗಳನ್ನು ಆಗಿಂದಾಗ್ಗೆ ಲಿಲಾವು ಮಾಡುವುದು, ಹೊಸ ಪತ್ರಗಳನ್ನು ಪರಿಚಯಿಸುವುದು, ಅವಧಿ ತುಂಬಿದ ಸಾಲ ಪತ್ರಗಳ ವಿಲೇವಾರಿ ಕಾರ್ಯ ನಿರ್ವಹಿಸುವುದು, ಸರ್ಕಾರದ ಪ್ರತಿಭೂತಿಗಳ ಆಳ ಮತ್ತು ದ್ರವ್ಯತ್ವಗಳನ್ನು ಉತ್ತಮಗೊಳಿಸುವುದು, ದ್ವಿತೀಯ ಮಾರುಕಟ್ಟೆಯನ್ನೂ ನಿರ್ವಹಿಸುವುದು ಮೊದಲಾದವುಗಳನ್ನು ನೋಡಿಕೊಳ್ಳುತ್ತದೆ. 
ಆರ್ಥಿಕ ನೀತಿಯನ್ನು ಪಾಲನೆ ಮಾಡುವುದರೊಂದಿಗೆ ದ್ರವ್ಯತ್ವ ಕಾರ್ಯವಿಧಾನದ ಉಸ್ತುವಾರಿ ಮಾಡುವಾಗ ಮತ್ತು ಬೇಕೆಂದಾಗ ಇತರ ಸಾದನೋಪಕರಣಗಳಾದ ತೆರೆದ ಮಾರುಕಟ್ಟೆಯ ಕಾರ್ಯವಿಧಾನಗಳು, ರೆಪೋಸ್, ವಿರುದ್ಧದ ರಿಪೋಸ್ ಗಳು ಮೊದಲಾದವುಗಳ ಮೂಲಕ ದ್ರವ್ಯತ್ವ ಕಾರ್ಯಕ್ಷಮತೆಯನ್ನು ನೋಡಿಕೊಳ್ಳುವುದು.

(ಪರಿಷ್ಕರಣೆ: ಜಿ.ಆರ್.ವಿ; ವೈ.ಕೆ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ